ಪೋರ್‍ಬಂದರ್ -
	ಗುಜರಾತ್ ರಾಜ್ಯದ ಜುನಾಗಢ ಜಿಲ್ಲೆಯಲ್ಲಿರುವ ಒಂದು ರೇವುಪಟ್ಟಣ. ಅರಬ್ಬಿ ಸಮುದ್ರಾಭಿಮುಖವಾಗಿ ಉ.ಅ. 21038 ಮತ್ತು ಪೂ. ರೇ. 690 36 ಮೇಲೆ ಇದೆ. ಮಹಾತ್ಮ ಗಾಂಧಿಯವರು ಹುಟ್ಟಿದ್ದು ಇಲ್ಲೇ. 16 ನೆಯ ಶತಮಾನದಲ್ಲಿ ಇದು ಜೇತ್ವಾ ರಜಪೂತರ ನಿಯಂತ್ರಣದಲ್ಲಿತ್ತು. ಬ್ರಿಟಿಷರು ಸ್ಥಾಪಿಸಿದ ಕಾಠಿಯಾವಾಡ ಸಂಸ್ಥಾನಗಳಲ್ಲಿ ಒಂದಾದ ಪೋರ್‍ಬಂದರ್ ಸಂಸ್ಥಾನಕ್ಕೆ ಇದು 1785 ರಿಂದ 1948 ರವರೆಗೆ ರಾಜಧಾನಿಯಾಗಿತ್ತು. ಆ ಸಂಸ್ಥಾನ ಸುಮಾರು 1,385 ಚ.ಕಿ.ಮೀ. ವಿಸ್ತಾರವಾಗಿತ್ತು. ಅದಕ್ಕೆ 103 ಗ್ರಾಮಗಳು ಸೇರಿದ್ದುವು. ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ ಪೋರ್‍ಬಂದರ್ ಸಂಸ್ಥಾನ ಮುಂಬೈ ರಾಜ್ಯಕ್ಕೆ ಸೇರಿತ್ತು. ಗುಜರಾತ್ ಪ್ರತ್ಯೇಕ ರಾಜ್ಯವಾದಾಗ ಪೋರ್‍ಬಂದರ್ ಅದರ ಭಾಗವಾಯಿತು (1960).

ಪೋರ್‍ಬಂದರ್ ಪ್ರಾಚೀನ ಕಾಲದಿಂದ ಭಾರತದ ಪಶ್ಚಿಮ ಕರಾವಳಿಯ ಇತರ ರೇವುಗಳೊಡನೆ ವಾಣಿಜ್ಯ ಸಂಪರ್ಕ ಹೊಂದಿದೆ. ಅದು ಕಟ್ಟಡ ಕಲ್ಲಿಗೆ ಪ್ರಸಿದ್ಧ. ಈಗ ಅಲ್ಲಿ ಅನೇಕ ಕೈಗಾರಿಕೆಗಳು ಸ್ಥಾಪಿತಾಗಿವೆ. ಅದೊಂದು ರೈಲ್ವೆ ಜಂಕ್ಷನ್. ಅಲ್ಲಿ ವಿಮಾನ ನಿಲ್ದಾಣವಿದೆ. ಜನಸಂಖ್ಯೆ 96,756 (1971).
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ